Saturday, February 05, 2011

ಕಲರ್‌ಫುಲ್ ಗ್ರಬ್ ಲೋಡರ್‍ ಬೇಕೆ?

ಲೈಫ್‌ನಲ್ಲಿ ಎಲ್ಲವೂ ಕಲರ್‌ಫುಲ್ ಆಗಿದ್ರೇನೆ ಚೆಂದ ಅಲ್ಲವೇ? ನಾವು ಈ ಕಲರ್‌ಫುಲ್ ಯುಗದಲ್ಲಿ black and white ಟಿವಿ ನೋಡಲು ಇಷ್ಟಪಡುವುದಿಲ್ಲ ಅಲ್ವಾ? ಇದೇ ರೀತಿ ಗ್ರಬ್ ಲೋಡರ್‌ನಲ್ಲಿ ಅದೇ ಕಪ್ಪು background ಮತ್ತು ಬಿಳಿ ಅಕ್ಷರಗಳನ್ನು ನೋಡಿ, ನೋಡಿ ಬೇಜಾರಾಗಿದೆಯೇ? ಹಾಗಾದರೆ ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಸ್ವಲ್ಪ ಆಟವಾಡಿ ನೋಡಿ, ಆಮೇಲೆ ಗ್ರಬ್ ಲೋಡರ್‌ನಲ್ಲಿ ಬಣ್ಣ ಬಣ್ಣದ ಅಕ್ಷರಗಳನ್ನು ಕಂಡು ಆನಂದಿಸಿ.

ಮೊದಲಿಗೆ Terminalನಲ್ಲಿ ಕೆಳಗಿನ ಕಮ್ಯಾಂಡ್ ಓಡಿಸಿ,
sudo gedit /boot/grub/grub.cfg

(ಹಳೆಯ ಉಬುಂಟು ಆವೃತ್ತಿ ಇಟ್ಟುಕೊಂಡಿರುವವರು ಇದನ್ನು ರನ್ ಮಾಡಿ,
sudo gedit /boot/grub/menu.lst)

ನಂತರ ಬರುವ ಗ್ರಬ್ ಕಾನ್ಫಿಗರೇಷನ್ ಫೈಲ್‌ನ ಸುಮಾರು 64 ಮತ್ತು 65ನೇ ಸಾಲಿನಲ್ಲಿ
set menu_color_normal=white/black
(ಹಾಗೂ ನಂತರದ ಸಾಲಿನಲ್ಲಿ)
set menu_color_highlighted=black/light-gray ಅಂತ ಇದೆಯೇ ಎಂದು ನೋಡಿ. ಅಲ್ಲಿ ಇಲ್ಲದಿದ್ದರೆ ಸ್ವಲ್ಪ ಮೇಲೆ ಕೆಳಗೆ ಹುಡುಕಿ, ಸಿಗುತ್ತದೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಇಲ್ಲಿ ಮೊದಲನೆಯ ಸಾಲಿನಲ್ಲಿ (set menu_color_normal=), ಎರಡು ಬಣ್ಣಗಳ ಹೆಸರು ಇದೆಯಲ್ಲ (white/black), ಅದು ಗ್ರಬ್‌ನಲ್ಲಿ ಫಾಂಟ್ ಬಣ್ಣ ಮತ್ತು ಗ್ರಬ್‌ನ ಹಿಂಬದಿ ಬಣ್ಣವನ್ನು ಸೂಚಿಸುತ್ತದೆ. ಅಂದರೆ ಕಪ್ಪು ಹಿನ್ನಲೆಯಲ್ಲಿ ಬಿಳಿ ಅಕ್ಷರಗಳು. ಈಗ ಅದನ್ನು ನಿಮಗೆ ಬೇಕಾದ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: light-blue/black. ಇದು ಕಪ್ಪು ಹಿನ್ನಲೆಯಲ್ಲಿ, ತಿಳಿ ನೀಲಿ ಅಕ್ಷರಗಳನ್ನು ನೂಚಿಸುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಿ. ಬಣ್ಣಗಳನ್ನು ಸೂಚಿಸುವಾಗ ಸಾಮಾನ್ಯ ಬಳಕೆಯಲ್ಲಿರುವ, ಅಂದರೆ ಕಂಪ್ಯೂಟರ್‌ಗೆ ಸುಲಭವಾಗಿ ಗೊತ್ತಾಗುವ ಬಣ್ಣಗಳನ್ನೇ ಕೊಡಿ. ಅಂದರೆ black, white, red, blue, gray, light-blue, green, yellow ಇತ್ಯಾದಿ. ನೀವು violet, purple, brick-red ಅಂತೆಲ್ಲಾ ಕೊಟ್ಟರೆ ಅದಕ್ಕೆ ಗೊತ್ತಾಗಲ್ಲ! ;-)



ಅದರ ನಂತರದ ಸಾಲು ಇದೆಯಲ್ಲ(set menu_color_highlighted=), ಅದು ಹೈಲೈಟ್ ಆದ entryಯ ಬಣ್ಣವನ್ನು(black/light-gray) ಸೂಚಿಸುತ್ತದೆ. ಅಂದರೆ ಹೈಲೈಟ್ ಆದ ಎಂಟ್ರಿಯ ಹಿನ್ನೆಲೆ ಬಣ್ಣ light-gray ಮತ್ತು ಅಕ್ಷರದ ಬಣ್ಣ ಕಪ್ಪನ್ನು ಸೂಚಿಸುತ್ತದೆ. ಇಲ್ಲಿಯೂ ನಿಮಗೆ ಇಷ್ಟವಾಗುವ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: red/yellow ಅಂದರೆ ಹೈಲೈಟ್ ಆದ ಎಂಟ್ರಿಯ ಫಾಂಟ್ ಕಲರ್‍ ಕೆಂಪು, ಮತ್ತು ಹಿನ್ನೆಲೆ ಬಣ್ಣ ಹಳದಿ. ಇಲ್ಲಿಯೂ ಕೂಡ ಬಣ್ಣಗಳನ್ನು ಸೂಚಿಸುವಾಗ ಸ್ವಲ್ಪ ಎಚ್ಚರ ವಹಿಸಿ. ನಂತರ ಫೈಲ್‌ನ್ನು ಸೇವ್ ಮಾಡಿ, ಕಂಪ್ಯೂಟರ್‍ ರೀಸ್ಟಾರ್ಟ್ ಮಾಡಿ. ಈಗ ನೋಡಿದರೆ ಗ್ರಬ್ ಲೋಡರ್‍ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿರಬೇಕಲ್ಲವೇ? ಮೇಲೆ ಹೈಲೈಟ್ ಆದ ಎಂಟ್ರಿಯ ಬಣ್ಣ ಹಳದಿ ಕೊಟ್ಟಿರುವುದರಿಂದ ಅದು ಮಿನುಗುತ್ತದೆ ಕೂಡಾ.

ಸೂಚನೆ: ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಏನೇ ಬದಲಾವಣೆ ಮಾಡುವ ಮೊದಲೂ ಸೂಕ್ತ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಡವಟ್ಟಾದರೂ ಆಮೇಲೆ ಲಿನಕ್ಸ್, ವಿಂಡೋಸ್ ಯಾವ್ದೂ ಬೂಟಾಗಲ್ಲ. ಆದ್ರಿಂದ ಮೇಲಿನ ಬದಲಾವಣೆ ಮಾಡುವಾಗ ಸಾಕಷ್ಟು ಎಚ್ಚರಿಕೆ ಅಗತ್ಯ.